ದೇವರನಾಮ: ನಮ್ಮಮ್ಮಶಾರದೆ ಉಮಾಮಹೆಶ್ವರಿ

ರಚನೆ: ಶ್ರೀ ಕನಕ ದಾಸರು

ರಗ: ಮೋಹನ / ಜಂಜೂಟಿ

ತಾಳ: ಆಟ

 

ನಮ್ಮಮ್ಮಶಾರದೆ ಉಮಾಮಹೆಶ್ವರಿ

ನಿಮ್ಮೊಳಗಿಹನ್ಯಾರಮ್ಮ                    ||ಪ||

 

ಕಮ್ಮಗೋಲನ ವೈರಿಸುತನಾದ ಸೊಂಡಿಲ

ಹೆಮ್ಮೆಯ್ಯ ಗಣನಾಥನೆ                    ||ಅ ಪ||

 

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ

ಕೋರೆದಾಡೆಯವನ್ಯಾರಮ್ಮ

ಮೂರುಕಣ್ಣಿನ ಸುತ ಮುರಿದಿಟ್ಟ ಚಂದ್ರನ

ಧೀರ ತಾ ಗಣನಾಥನೆ ಅಮ್ಮಯ್ಯ                ||೧||

 

ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ

ದಿಟ್ಟ ತಾನಿವನ್ಯಾರಮ್ಮ

ಪಟ್ಟದ ರಾಣಿ ಪಾರ್ವತಿಯ ಕುಮರ

ಹೊಟ್ಟೆಯ ಗಣನಾಥನೆ ಅಮ್ಮಯ್ಯ                ||೨||

 

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ

ಭಾಷಿಗನಿವನ್ಯಾರಮ್ಮ

ಲೇಸಾಗಿ ಸುಜನರ ಸಲಹುವ ನೆಲೆಯಾದಿ

ಕೇಶವನ ದಾಸ ಕಾಣೆ ಅಮ್ಮಯ್ಯ                ||೩||