ಭಾಗ್ಯದ ಲಕ್ಷ್ಮೀ ಬಾರಮ್ಮ
ಶ್ರೀ ಪುರಂದರ ದಾಸರು
ರಾಗ: ಶ್ರೀ
ತಾಳ: ಝಂಪೆ
ಭಾಗ್ಯದ ಲಕ್ಷ್ಮೀ ಬಾರಮ್ಮ | ನಮ್ಮಮ್ಮ ನೀ ಸೌ
ಭಾಗ್ಯದ ಲಕ್ಷ್ಮೀ ಬಾರಮ್ಮ ||ಪ||
ಗೆಜ್ಜೆಕಾಲ್ಗಳ ಧ್ವನಿಯ ಮಾಡುತ | ಹೆಜ್ಜೆಯ ಮೆಲೆ ಹೆಜ್ಜೆಯನಿಕ್ಕುತ|
ಸಜ್ಜನ ಸಾಧು ಪೂಜೆಯ ವೇಳೆಗೆ | ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧||
ಕನಕವೃಷ್ಟಿಯ ಕರೆಯುತ ಬರೆ | ಮನಕೆ ಮಾನವ ಸಿದ್ಧಿಯ ತೋರೆ |
ದಿನಕರ ಕೋಟಿ ತೇಜದಿ ಹೋಳೆಯುವ | ಜನಕರಾಯನ ಕುಮಾರಿ ಬೇಗ || ೨||
ಅತ್ತಿತ್ತಗಲದೆ ಭಕ್ತರ ಮನೆಯಲಿ | ನಿತ್ಯ ಮಹೋತ್ಸವ ನಿತ್ಯ ಸುಮಂಗಳ|
ಸತ್ಯವ ತೋರುವ ಸಾಧು ಸಜ್ಜನರ | ಚಿತ್ತದಿ ಹೊಳೆವ ಪುತ್ತಳಿ ಬೊಂಬೆ || ೩||
ಸಂಖ್ಯೆ ಯಿಲ್ಲದ ಭಾಗ್ಯವ ಕೊಟ್ಟು | ಕಂಕಣ ಕೈಯ ತಿರುವುತ ಬರೆ|
ಕುಂಕುಮಾಂಕಿತೆ ಪಂಕಜ ಲೋಚನೆ | ವೇಂಕಟರಮಣನ ಬಿಂಕದ ರಾಣಿ ||೪||
ಸಕ್ಕರೆ ತುಪ್ಪ ಕಾಲಿವೆ ಹರಿಸಿ | ಶುಕ್ರವಾರದ ಪೂಜೆಯ ವೇಳೆಗೆ |
ಅಕ್ಕರವುಳ್ಳ ಅಳಗಿರಿ ರಂಗನ | ಚೊಕ್ಕ ಪುರಂದರ ವಿಠಲನ ರಾಣಿ ||೫||