ಗರುಡ ಗಮನ
ಗರುಡ ಗಮನ ಬಂದನೋ ನೋಡಿರೊ ಬೇಗ
ಗರುಡ ಗಮನ ಬಂದನೋ /ಪ/
ಗರುಡ ಗಮನ ಬಂದ ಧರಣಿಯಿಂದೊಪ್ಪುತ (೨)
ಕರೆದು ಬಾರೆನ್ನುತ ವರಗಳ ಬೀರುತ (೨) /ಗರುಡ/ /ಅ ಪ/
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ (೨)
ಚಿನ್ನವ ಪೋಲುವ ವಿಹಂಗಜ ರಥದಲ್ಲಿ (೨)
ಘನ್ನಮಹಿಮ ಬಂದ ಬಿನ್ನ ಮೂರುತಿ ಬಂದ (೨)
ಸಣ್ಣ ಕೃಷ್ಣ ಬಂದ ಬೆಣ್ಣೆ ಕಳ್ಳ ಬಂದ (೨) /ಗರುಡ/
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ (೨)
ಕುಕ್ಷಿಯೊಳಗೆ ಜಗವನಿತ್ತವಾ ತಾ ಬಂದ (೨)
ಸೂಕ್ಷ್ಮ ಸ್ಥೂಲದೊಳು ಇಪ್ಪಾನು ತಾ ಬಂದ (೨)
ಸಾಕ್ಷಿಭೂತ ಅವ ಸರ್ವೇಶ್ವರ ಬಂದ (೨) /ಗರುಡ/
ತಂದೆ ಪುರಂದರ ವಿಠಲರಾಯ ಬಂದ (೨)
ಬಂದು ನಿಂತು ನಲಿದಾಡಿದನೂ (೨)
ಸಿಂಧುಶಯನ ಬಂದ ಅಂದು ಸಂದೀಪನ (೨)
ನಂದನ ತಂದಿತ್ತ ಆನಂದ ಮೂರುತಿ ಬಂದ (೨) /ಪ ಅಪ/ /ಪ/