ದೇವರನಾಮ: ನಿನ್ನ ಒಲುಮೆಗೆ ನಾನು ಈಡೇನೊ ರಂಗ

ರಚನೆ: ಶ್ರೀ ಪುರಂದರ ದಾಸರು

ರಗ: ಕಾಂಭೋಜಿ

ತಾಳ: ಝಂಪೆ

 

ನಿನ್ನ ಒಲುಮೆಗೆ ನಾನು ಈಡೆನೊ ರಂಗ            ||ಪ||

 

ಸಣ್ಣವನು ನಾನಯ್ಯ ಪನ್ನಗಾಚಲವಾಸ        ||ಅ ಪ||

 

ಅಜಿತನಾಮಕ ನೀನು ಅಲ್ಪಶಕ್ತನು ನಾನು |

ಕುಜನದೂಷಕ ನೀನು ಅವರ ಮಿತ್ರನು ನಾನು ||

ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ |

ಅಜನ ಪೆತ್ತ ನಿನಗೆ ಸರಿ ಯಾರು ಪೇಳಯ್ಯ            ||೧||

 

ಅನೇಕ ಅದ್ಬುತ ಚರಿತ್ರ ಪಿಡಿದೆ ಹೇಸಿಗೆ ಮಾರ್ಗ |

ಅನೇಕ ಭಕ್ತರ ಪೋಷ ನಾನವರ ದೂಷಕ ||

ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ |

ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ            ||೨||

 

ಪರಮಪಾವನ ನೀನು ದುಷ್ಟ ತರಳನು ನಾನು|

ಕರುಣಾಬ್ದಿಯು ನೀನು ಕಠಿನಚಿತ್ತ ನಾನು ||

ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟಿ |

ಮರಳಿ ಪುಟ್ಟದೆ ಮಾಡು ತಂದೆ ಪುರಂದರವಿಠಲ        ||೩||