ಆನಂದ ತೀರ್ಥರಿಗೆ

 

ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ

ಓ ಅರಳು ದಾವರೆಯ ಕಂಗಳವನೆ

 

ಆನಂದತೀರ್ಥರಿಗೆ ತುಂಬು ಸಂತಸವೆಂಬ

ವರವಿತ್ತ ದೈವತವೆ ನಿನಗೆ ನಮನಂ ನಿನಗೆ ನಮನಂ //ಪ//

 

ಬಗೆಯ ಸುಂದರಿಯನ್ನು

ಎದೆಯಲ್ಲಿ ಹೊತ್ತವನೆ

ಓ ಗೋವಿಂದನೆ ನಿನಗೆ ನಮನಂ ನಿನಗೆ ನಮನಂ /ಆನಂದ/

 

ಬಗೆಯ ಬೆಳಗುವ ಚಂದ್ರ

ಸುರರನಾಳುವ ಇಂದ್ರ

ಇವರಿಂದ ವಂದಿತನೆ ನಿನಗೆ ನಮನಂ ನಿನಗೆ ನಮನಂ /ಆನಂದ/

 

ಚಂದಿರನ ಹೊತ್ತಿರುವ

ನವಿಲ ಸೋಗೆಯ ತೋರ್ದು

ಜಗಕೆ ಸಂತಸವೀವ ನಿನಗೆ ನಮನಂ ನಿನಗೆ ನಮನಂ /ಆನಂದ/

 

ದೇವಲೋಕದ ಎಲ್ಲ

ತಗ್ಗಿಗರ ಗಢಣವು

ಭಕ್ತಿಯಿಂದೆರಗುತಿಹ ನಿನಗೆ ನಮನಂ ನಿನಗೆ ನಮನಂ /ಆನಂದ/

 

ನಿನ್ನೆಡೆಗೆ ಹರಿದು ಬಹ

ಸುರರೆಡೆಗೆ ಕಾರುಣ್ಯ

ರಸವನ್ನು ಸುರಿಸುತಿಹ ನಿನಗೆ ನಮನಂ ನಿನಗೆ ನಮನಂ /ಆನಂದ/

 

ಇಂದಿರೆಯ ಬಗೆಯಲ್ಲಿ

ಸಂತಸವ ನೂಕಿಸುವ

ಲೋಕೈಕ ಸುಂದರನೆ ನಿನಗೆ ನಮನಂ ನಿನಗೆ ನಮನಂ /ಆನಂದ/

 

ಮಂದಾರದರಳುಗಳು

ಚೆಲ್ಲಿ ಪರಿಮಳಿಸುತಿಹ

ಮಂದಿರದಲ್ಲಿರುವವನೆ ನಿನಗೆ ನಮನಂ ನಿನಗೆ ನಮನಂ /ಆನಂದ/

 

ಸಂತಸದ ಹೊನಲೆಂಬ

ಚೆಲ್ವ ಬೆಳದಿಂಗಳನು

ನಮ್ಮೆಡೆಗೆ ಹರಿಯಿಸುವ ನಿನಗೆ ನಮನಂ ನಿನಗೆ ನಮನಂ

 

ಆನಂದತೀರ್ಥರಿಗೆ.. ಆನಂದತೀರ್ಥರಿಗೆ

ಆನಂದತೀರ್ಥರಿಗೆ ತುಂಬು ಸಂತಸವೆಂಬ

ವರವಿತ್ತ ದೈವತವೆ ನಿನಗೆ ನಮನಂ ನಿನಗೆ ನಮನಂ ನಿನಗೆ ನಮನಂ