ದೇವರನಾಮ: ವಾದಿರಾಜಮುನಿಪ ಹಯಮುಖ
ರಚನೆ: ಶ್ರೀ ಗೋಪಾಲ ದಾಸರು
ರಾಗ: ಖರಹರಪ್ರಿಯ
ತಾಳ: ಆದಿ
ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ ||ಪ||
ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು ||ಅ ಪ||
ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ ||೧||
ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ ||೨||
ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ-
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ ||೩||
ತುರಗವದನ ಪಾದ ಭುಜ(ದಲಿ)ಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ ||೪||
ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ ||೫||