ದೇವರನಾಮ: ರತುನ ದೊರಕಿತಲ್ಲ

ರಚನೆ: ಶ್ರೀ ಜಗನ್ನಾಥ ದಾಸರು

ರಾಗ: ಬಿಲಹರಿ

ತಾಳ: ಆಟ

 

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ        ||ಪ||

 

ರತುನ ದೊರಕಿತು ಎನ್ನ ಜನ್ಮ ಪ-

ವಿತ್ರವಾಯಿತು ಈ ದಿನವು ನಾ

ಯತುನಗೈವುತ ಬರುತಿರಲು ಪ್ರ-

ಯತನವಿಲ್ಲದೆ ವಿಜಯರಾಯರೆಂಬ                        ||ಅ ಪ||

 

ಪಥದಿ ನಾ ಬರುತಿರಲು ಥಳಥಳವೆಂದು

ಅತಿಕಾಂತಿ ಝಳಪಿಸಲು ಬೆರಗಾಗುತ್ತ

ಅತಿಚೋದ್ಯವ ಕಾಣಲು ಸೇವಿಸುತಿರೆ

ಸತತ ಕರಪಿಡಿದಾದರಿಸಿ ಮನೋ

ರಥವ ಪೂರೈಸುತಲಿ ದಿವ್ಯ ಸ-

ನ್ಮತಿಯ ಪಾಲಿಸಿ ಮೋಕ್ಷ ಸುಪಥವ

ಅತಿಶಯದಿ ತೋರುತಲಿ ಪೊರೆಯುವ                    ||೧||

 

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ

ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ

ನಾನಾ ವಿದ್ಹವಳದಲಿ ಸೇರಿಸುತಿರೆ

ಪ್ರಾಣಪದಕವೆಂಬ ಮಾಲಾನು

ಮಾನವಿಲ್ಲದೆ ಕೊರಳಿಗ್ಹಾಕುತ

ಗಾನದಿಂ ಕುಣಿಯುತಲಿ ಪಾಡುತ                ||೨||

 

ದೀನ ಜನರುದ್ಧಾರ ಗಯ್ಯುವ

ಶೋಧಿಸಿ ಗ್ರಂಥಗಳ ಸುಳಾದಿಯ

ಮೋದದಿಂದಲಿ ಬಹಳ ಕವಿತೇ ಮಾಡಿ

ಸಾಧುಜನಕೆ ಸುಕಾಲ ಆನಂದವಿತ್ತು

ವಾದಿ ಜನರನು ಗೆದ್ದು ವಾದಿಸಿ

ಮಾಧವ ಜಗನ್ನಾಥವಿಠಲನ

ಪಾದಕಮಲಕೆ ಮಧುಪನಂದದಿ

ಸಾದರದಿ ತೋರಿಸುತ ಮೆರೆಯುವ                ||೩||