ರಾಮ ಮಂತ್ರವ ಜಪಿಸೊ
ಶ್ರೀ ಪುರಂದರ ದಾಸರು
ರಾಗ: ಮಧ್ಯಮಾವತಿ
ತಾಳ: ಆದಿ
ರಾಮ ಮಂತ್ರವ ಜಪಿಸೊ ಹೇ ಮನುಜ ||ಪ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ |
ಸೋಮಶೇಖರ ತನ್ನ ಭಾಮಿನಿಗೊರೆದಿಹ ಮಂತ್ರ ||ಅ ಪ||
ಕುಲಹೀನನಾದರು ಕೂಗಿಜಪಿಸುವ ಮಂತ್ರ |
ಸಲೆ ಬೀದಿಯೊಳು ಉಚ್ಚರಿಪ ಮಂತ್ರ ||
ಹಲವು ಪಾಪಂಗಳ ಹದೆಗೆಡಿಸುವ ಮಂತ್ರ |
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ ||೧||
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ |
ಸರುವ ಋಷಿಗಳಲ್ಲಿ ಸೇರಿದ ಮಂತ್ರ ||
ದುರಿತಕಾನನಕಿದು ದಾವನಲ ಮಂತ್ರ |
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ ||೨||
ಜ್ಞಾನನಿಧಿ ನಮ್ಮ ಆನಂದತಿರ್ಥರು |
ಸಾನುರಾಗದಿ ನಿತ್ಯ ಸೇವಿಪ ಮಂತ್ರ ||
ಭಾನುಕುಲಾಂಬುಧಿ ಸೋಮನೆನಿಪ ನಮ್ಮ |
ದೀನರಕ್ಷಕ ಪುರಂದರ ವಿಠಲನ ಮಂತ್ರ | ||೩||