ದೇವರನಾಮ: ರಾಮ ನಾಮವ ನೆನೆ ಮನವೆ
ರಚನೆ: ಶ್ರೀ ಕನಕ ದಾಸರು
ರಾಗ: ಕಾಂಬೋದಿ
ತಾಳ: ಆದಿ
ರಾಮ ನಾಮವ ನೆನೆ ಮನವೆ ||ಪ||
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ||ಅ ಪ||
ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ||೧||
ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ||೨||
ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ ||೩||