ದೇವರನಾಮ: ಒಂಬತ್ತು ಬಾಗಿಲೊಳು
ಶ್ರೀ ಪುರಂದರ ದಾಸರು
ರಾಗ: ಮಾಯಮಾಳವಗೌಳ
ಟಾಳ: ಆದಿ
ಒಂಬತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ |
ನಂಬಿಕಿಲ್ಲದ ಸಂಸಾರಮಾಡಿದೆನೆ ಸೂವಿಯ ಬೀಬಿ ||ಪ||
ತನುವೆಂಬ ಕಲ್ಲಿನೊಳು ಮನೆವೆಂಬೊ ಧಾನ್ಯವ ತುಂಬಿ |
ವನವನದು ನವಬೇಳೆ ಬೀಸಿದೆನೆ ||೧||
ಅಷ್ಟ ಕರ್ತೃ ಗಳೆಂಬೊ ಅಷ್ಟನವಧಾನ್ಯವ ತಂದು |
ಕುಟ್ಟಿ ಕುಟ್ಟಿ ಕಜ್ಜಾಯ ಕರಿದೆನೆ ||೨||
ಅಷ್ಟಕರ್ತೃ ಗಳೆಂಬೊ ಕಾಲವನ್ನುಳಿಸಿ (ಕಾಷ್ಟವನ್ನುರಿಸಿ) ನಾನು |
ನಿಷ್ಟೆಯಿಂದಲಿ ಅನ್ನವ ಬಾಗಿದೆನೆ ||೩||
ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು |
ಮುಟ್ಟಿ ಮುರಿದು ಮೂಲೆಗೆ ಹಾಕಿದನೆ ||೪||
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ |
ತಿರುಗಿ ಬಾರದ್ಹಾಂಗೆ ಮಾಡಿದನೆ ||೫||
ಮಾಡಿದೆ ಒಗತನವ ನಂಬಿಕಿಲ್ಲದ ಸಂಸಾರವ ನೆಚ್ಚಿ |
ಕೂಡಿದ ಪುರಂದರ ವಿಠಲನ್ನ ದಾಸರ ||೬||