ದೇವರನಾಮ: ನೀನೆ ಬಲ್ಲಿದನೋ
ರಚನೆ: ಶ್ರೀ ಪುರಂದರ ದಾಸರು
ರಾಗ: ಶಂಕರಾಭರಣ
ತಾಳ: ಆಟ
ನೀನೆ ಬಲ್ಲಿದನೋ ಹರಿ | ನಿನ್ನ ದಾಸರು ಬಲ್ಲಿದರೋ ||ಪ||
ನಾನಾ ತೆರದಿ ನಿಧಾನಿಸಿ ನೋಡಲು |
ನೀನೆ ಭಕ್ತರಾಧೀನನಾದ ಮೇಲೆ || ಅ ಪ||
ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ |
ಬಲು ದೊಡ್ಡವನು ನೀನಹುದೊ ||
ಆಲಸದೆ ಹಗಲಿರುಳೆನ್ನದೆ ಅನುದಿನ |
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ ||೧||
ಖ್ಯಾತಿಯಿಂದಲಿ ಪುರುಹೂತಸಹಿತ ಸುರ |
ವ್ರಾತವು ನಿನ್ನನ್ನು ಓಲೈಸಲು ||
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ |
ಪರ್ಥನ ರಥಕೆ ಸೂತನಾದ ಮೇಲೆ ||೨||
ಪರಮಪುರುಷ ಪರಬೊಮ್ಮ ನೀನೆನುತಲಿ |
ನಿರತ ಶ್ರುತಿಯು ಕೊಂಡಾಡುತಿರೆ +||
ವರ ಪಂಡವರ ಮನೆಯೊಳಿಗ ಮಾಡ್ಯವರು |
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ ||೩||
ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ |
ಹರಿಪೆನೆನುತ ಚ್ಕ್ರ ಝಳಿಸುತ ||
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ |
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ||೪||
ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು |
ನರಮೃಗರೂಪದಿಂದವನ ಕಾಯ್ದೆ ||
ವರಗಳೀವ ಪುರಂದರ ವಿಠಲ ನಿನ್ನ |
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ||೫||