ದೆವರನಾಮ: ನಾ ನಿನಗೇನು
ರಚನೆ: ಶ್ರೀ ಶ್ರೀಪಾದರಜರು
ರಾಗ: ವಸಂತ (ಬಸಂತ)
ತಾಳ: ತ್ರಿಪುಟ (ತೀನ್ ತಾಲ್)
ನಾ ನಿನಗೇನು ಬೇಡುವುದಿಲ್ಲ - ಎನ್ನ |
ಹೃದಯಕಮಲದೊಳು ನೆಲೆಸಿರು ಹರಿಯೆ
ಶಿರ ನಿನ್ನ ಚರಣಕ್ಕೆರಗಲಿ ಚಕ್ಷು |
ಎರಕದಿಂದಲಿ ನಿನ್ನ ನೋಡಲಿ ಹರಿಯೆ ||
ಕರಣ ಗೀತಂಗಳ ಕೇಳಲಿ ನಾಸಿಕ |
ನಿರ್ಮಾಲ್ಯಾನುದಿನ ಘ್ರಾಣಿಸಲಿ ಹರಿಯೆ
ನಾಲಿಗೆ ನಿನ್ನ ಕೊಂಡಾಡಲಿ ಎನ್ನ |
ತೋಳು ಕರಂಗಳ ಮುಗಿಯಲಿ ಹರಿಯೆ ||
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ |
ಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ|
ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ |
ಭಕ್ತ ಜನರ ಸಂಗ ದೊರಕಲಿ ಹರಿಯೆ ||
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ- |
ವಿಠಲ ನಿನ್ನ ದಯವಾಗಲಿ ಹರಿಯೆ ||೩||