ದೇವರನಾಮ: ಮಧ್ವಾಂತರ್ಗತ ವೇದವ್ಯಾಸ ಕಾಯೊ

ರಚನೆ: ಶ್ರ‍ೀ ವಾದಿರಾಜರು

ರಾಗ: ಅಸಾವೇರಿ (ಭೂಪ)

ತಾಳ: ಆದಿ (ದೀಪಚಂದಿ)

 

ಮಧ್ವಾಂತರ್ಗತ ವೇದವ್ಯಾಸ ಕಾಯೊ

ಶುದ್ಧ ಮೂರುತಿಯೆ ಸರ್ವೇಶ                ||ಪ||

 

ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ |

ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ ||ಅ ಪ||

 

ದ್ವಾಪರದಲಿ ಒಬ್ಬ ಮುನಿಪ ತನ್ನ |

ಕೋಪದಿಂದಲಿ ಕೊಡಲು ಶಾಪ ||

ಸ್ಥಾಪಿಸಲು ಜ್ಞಾನ ಲೋಪ |

ಅಪಾರ ತತ್ತ್ವಸ್ವರೂಪ    ||

ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ |

ಪಾಪವಿರಹಿತಳಾದ ಯಮುನೆಯ ||

ದ್ವೀಪದಲಿ ಅಂಬಿಗರ ಹೆಣ್ಣಿನ |

ರೂಪಗೊಲಿದವನಲ್ಲಿ ಜನಿಸಿದಿ            ||೧||

 

ವೇದವಾದಿಗಳೆಲ್ಲ ಕೆಡಲು ತತ್ತ್ವ-|

ವಾದಿ ಜನರು ಬಾಯಿ ಬಿಡಲು ||

ಮೇದಿನಿ ಸುರರು ಕಂಗೆಡಲು ನಾನಾ

ವೇದವಿಭಾಗ ರಚಿಸಲು ||

ಮೋದದಿಂದ ತದರ್ಥಬೋಧಕ |

ವಾದಶಾಸ್ತ್ರ ಪುರಾಣ ರಚಿಸಿ ವಿ-||

ವಾದಗಳ ನಿರ್ವಾದ ಮಾಡಿದ |

ಸಾಧುವಂದಿತ ಬಾದರಾಯಣ            ||೩||

 

ಸುಮತಿಗಳಿಗೆ ಬೋಧಿಸಿದೆ ಮಿಕ್ಕ |

ಕುಮತಿಗಳನು ಭೇದಿಸಿದೆ ||

ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-|

ತ್ಸ್ವಾಮಿ ನೀನೆಂದು ತೋರಿಸಿದೆ ||

ವಿಮಲರೂಪನೆ ಕಮಲನಾಭನೆ |

ರಮೆಯ ಅರಸನೆ ರಮ್ಯಚರಿತನೆ ||

ಮಮತೆಯಲಿ ಕೊಡು ಕಾಮಿತಾರ್ಥವ |

ನಮಿಸುವೆನು ಹಯವದನಮೂರುತಿ            ||೩||