ದೇವರನಾಮ: ಹರಿ ಹರಿಯೆನ್ನಲಿಕೆ ಹೊತ್ತಿಲ್ಲ
ರಚನೆ: ಶ್ರೀ ಪುರಂದರ ದಾಸರು
ರಾಗ: ಪೂರ್ವಿ
ತಾಳ: ಏಕ
ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ |
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ||
ಹರಿಜಾಗರಣೆಯಲ್ಲಿ ಪಾರಣೆ ಚಿಂತೆ |
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ||
ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ |
ಪುರಾಣ ಕೇಳ್ವಾಗ ಗೃಹದ ಚಿಂತೆ ||೧||
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ |
ಪೆರ್ಮನ ಮಾಡಲು ಬಲು ಚಿಂತೆ ||
ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ |
ದುರ್ಮದದಿ ನಡೆಯ ಪ್ರಾಣದ ಚಿಂತೆ ||೨||
ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ |
ಸಂಗಡದವರು ಪೋಗುವ ಚಿಂತೆ |
ಪನ್ನಗಶಯನ ಶ್ರೀ ಪುರಂದರವಿಠಲನ್ನ |
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||೩||