ದೇವರನಾಮ: ಗೋಪಿಯ ಭಾಗ್ಯವಿದು

ರಚನೆ: ಶ್ರೀ ಪುರಂದರ ದಾಸರು

ರಾಗ: ಬೇಹಾಗ್

ತಾಳ: ಆದಿ

 

ಗೋಪಿಯ ಭಾಗ್ಯವಿದು |

ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು             ||ಪ||

 

ಕಡುಮುದ್ದು ರಂಗನ ತೊಡೆಯಮೇಲೆತ್ತುತ |

ಜಡೆಯ ಹೆಣೆದು ಹೂ ಮುಡಿಸಿ ಬೇಗ ||

ಬಿಡದೆ ಮುತ್ತಿನ ಚೆಂದರೆಳೆಯನು |

ಸಡಗರದಿಂದಲಂಕರಿಸಿದಳು             ||೧||

 

ನಿತ್ಯ ನಿರ್ಮಲನಿಗೆ ನೀರನೆರದು ತಂ |

ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ ||

ಮುತ್ತು ಕೊಟ್ಟು ಬಲು ವಿಧದಿಂದಾಡಿಸಿ |

ಅರ್ತಿಯಿಂದಲಿ ತಾ ತೂಗಿದಳು                ||೨||

 

ದೃಷ್ಟಿ ತಾಗಿತೆಂದಿಟ್ಟು ವಿಭೂತಿಯ |

ತಟ್ಟೆಯೊಳಾರತಿಗಳ ಬೆಳಗಿ ||

ಥಟ್ಟನೆ ಉಪ್ಪು ಬೇವು ನಿವಾಳಿಸಿ |

ತೊಟ್ಟಿಲೊಳಿಟ್ಟು ತಾ ತೂಗಿದಳು                 ||೩||

 

ಎಮ್ಮಯ್ಯ ರನ್ನನೆ ಸುಮ್ಮನಿರೋ ದೊಡ್ಡ |

ಗುಮ್ಮನು ಬರುವನು ಅಳಬೇಡ ||

ಸುಮ್ಮನೆ ಇರು ನಿನಗಮ್ಮಿಕೊಡುವೆನೆಂದು |

ಬೊಮ್ಮನ ಪಿತನ ತಾ ತೂಗಿದಳು            ||೪||

 

ಮಾಧವ ಜೋ ಮಧುಸೂದನ ಜೊ ಜೋ |

ಯಾದವರಾಯ ಶ್ರೀರಂಗನೆ ಜೋ ||

ಆದಿ ಮೂರುತಿ ನಮ್ಮ ಪುರಂದರವಿಠಲನ |

ಆದರದಿಂದ ತಾ ತೂಗಿದಳು                ||೫||