ಏನಾಯಿತೊ ಈ ಜನಕೆ
ರಚನೆ: ಶ್ರೀ ಪುರಂದರ ದಾಸರು
ರಾಗ: ಬಿಲಹರಿ
ತಾಳ: ಆಟ
ಏನಾಯಿತೊ ಈ ಜನಕೆ |
ಮೌನವನು ಹಿಡಿದು ಮರೆತರು ಹರಿಯ ||ಪ||
ನಾಲಿಗೆ ಮುರಿದಿತೊ ನೆಗ್ಗಿನ ಕೊನೆಮುಳ್ಳು |
ಬಾಲಕತನದಿ ಭೂತ ಹಿಡಿಯಿತೊ ||
ಮೇಲೆ ಕೆಲೆಗಿನ ತುಟಿ ಎರಡು ಒಂದಾಯಿತೊ |
ಕಾಲಮೃತ್ಯುವು ಬಂದು ಕಂಗೆಡಿಸಿತೊ ||೧||
ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ |
ಕಟಕರಿಸಿ ನಾಲಿಗೆ ಕಡಿದ್ಹೋಯಿತೋ ||
ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ |
ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ ||೨||
ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ |
ಹರಿನಾಮ ಹಣೆಯಲ್ಲಿ ಬರೆದಿಲ್ಲವೆ ||
ವರದ ಪುರಂದರವಿಠಲರಾಯನ್ನ |
ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೇ ||೩||