ದೇವರನಾಮ: ಏಳೇಳು ಶರಧಿಯು
ರಚನೆ: ಶ್ರೀ ಪುರಂದರ ದಾಸರು
ರಾಗ: ಸೌರಾಷ್ಟ್ರ
ತಾಳ: ಆಟ
ಏಳೇಳು ಶರಧಿಯು ಏಕವಾಗಿದೆ ಕಂಡ್ಯ |
ಹೇಗೆ ಬಂದೆ ಹೇಳೋ ಕೋತಿ || ||ಪ||
ಏಳು ಶರಧಿಯು ಎನಗೆ ಏಳು ಕಾಲುವೆಯು |
ತೂಳಿ ಲಂಘಿಸಿ ಬಂದೆ ಭೂತ ||ಅ ಪ||
ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ |
ಹೇಗೆ ಬಿಟ್ಟರು ಹೇಳೊ ಕೋತಿ ||
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ |
ಮಾತಾಡಿ ಬಂದೆನೊ ಭೂತ ||೧||
ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು |
ಹೇಗೆ ಬಿಟ್ಟಳು ಹೇಳೊ ಕೋತಿ ||
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು |
ಬಿಂಕದಿಂದಲಿ ಬಂದೆ ಭೂತ ||೨||
ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ |
ಹೇಗೆ ಬಿಟ್ಟರು ಪೇಳೊ ಕೋತಿ ||
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು |
ಕೊಂದ್ಹಾಕಿ ಬಂದೆನೊ ಭೂತ ||೩||
ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು |
ಯಾಕೆ ಬಂದೆ ಹೇಳೊ ಕೋತಿ ||
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ |
ಅವಳ ನೋಡಬಂದೆ ಭೂತ ||೪||
ದಕ್ಷಿಣಪುರಿ ಲಂಕದಾನವರಿಗಲ್ಲದೆ |
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ ||
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ |
ಈಕ್ಷಣ ತಪ್ಪಿಸಿಕೊಂಡೆ ಭೂತ ||೫||
ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ |
ಕೋಪವಿನ್ನೇತಕ್ಕೊ ಕೋತಿ ||
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ |
ನಿರ್ಧೂಮವನು ಮಾಳ್ಪೆ ಭೂತ ||೬||
ನಿಮ್ಮಂಥ ದಾಸರು ನಿಮ್ಮರಸನ ಬಳಿ |
ಎಷ್ಟು ಮಂದಿದ್ದಾರೆ ಕೋತಿ }}
ನನ್ನಂಥ ದಾಸರು ನಿನ್ನಂಥ ಹೇಡಿಗಳು |
ಕೋಟ್ಯಾನುಕೋಟಿಯೊ ಭೂತ ||೭||
ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ |
ಯಾವರಸನ ಬಂಟ ಕೋತಿ ||
ಚೆಲ್ವಯೋದ್ಯಾಪುರದರಸು ಜಾನಕಿಪತಿ |
ರಾಮಚಂದ್ರನ ಬಂಟ ಭೂತ ||೮||
ಸಿರಿರಾಮಚಂದ್ರನು ನಿನ್ನರಸನಾದರೆ |
ಆತ ಮುನ್ನಾರ‍್ಹೇಳೋ ಕೋತಿ |
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ |
ಪುರಂದರವಿಠಲನೊ ಭೂತ ||೯||