ದೇವರನಾಮ: ಅಂಧಂತಮಸು ಇನ್ನಾರಿಗೆ

ರಚನೆ: ಶ್ರ‍ೀ ಕನಕ ದಾಸರು

ರಾಗ: ಭೈರವಿ

ತಾಳ: ಆಟ

 

ಅಂಧಂತಮಸು ಇನ್ನಾರಿಗೆ-ಗೋ-

ವಿಂದನ ನಿಂದಿಸುವರಿಗೆ                ||ಪ||

 

ಸಂದೇಹವಿಲ್ಲವು ಸಾರಿಸಾರಿಗೆ ವಾಯು-

ನಂದನನ ವಂದಿಸದವರಿಗೆ        ||ಅ ಪ||

 

ಮಾತು ಮಾತಿಗೆ ಹರಿಯ ನಿಂದಿಸಿ-ಸ-

ರ್ವೋತ್ತಮ ಶಿವನೆಂದು ವಾದಿಸಿ

ಧಾತುಗ್ರಂಥಗಳೆಲ್ಲ ತೋರಿಸಿ-ವೇ-

ದಾಂತ ಪ್ರಮಾಣಗಳ ಹಾರಿಸಿ

ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು

ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ                ||೧||

 

ಮೂಲಕವತಾರಕ್ಕೆ ಭೇದವು-ಮುಖ್ಯ

ಶೀಲಪಂಡಿತರಿಳಗೆ ಅತಿ ವಾದವು

ಲೀಲಾಸಾದೃಶ್ಯವ ತೋರುತ-ಲಿಂಗ-

ಭಂಗವಿಲ್ಲದ ದೇಹ ಹಾರುತ

ಮೂಲಗುರುವು ಕುಂತೀಬಾಲನೆನ್ನದೆ ವೃಥಾ

ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ            ||೨||

 

ವ್ಯಾಸರ ಮಾತುಗಳಾಡುತ-ವಿ-

ಶ್ವಾಸಘಾತಕತನ ಮಾಡುತ

ದೋಷವೆಂದರೆ ನುಡಿ ಕೇಳದೆ-ಸಂ-

ತೋಷವೆಂದರೆ ನೋಡಿ ಬಾಳದೆ

ಶೇಷಶಯನ ಆದಿಕೇಶವರಾಯನ

ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ            ||೩||